20/04/2026
ಭಕ್ತಿ ಕಂಪಿತ ನಮ್ಮ ಕೂಡಲ ಸಂಗಮದೇವ
“ಹಿರಣ್ಯ ಗರ್ಭಾದಾರಾಬ್ದಾಂ, ಶೇಷ ವ್ಯಾಸಾದಿ ಮಾಧ್ಯಮಾಂ,
ಬಸವ ಪ್ರಮಥಾದಿ ಪಾದಾಂತಂ, ವಂದೇ ಹರಪೀಠ ಪರಂಪರಾಂ”
ಇತ್ತೀಚಿನ ದಿನಗಳಲ್ಲಿ ನಡೆದ ಬೆಳವಣಿಗೆಗಳು ಸಾಮಾಜಿಕ ಜಾಲತಾಣಗಳಲ್ಲಿ ಅಲೆಗಳಂತೆ ಹರಡಿ ಅನೇಕ ಮಾತುಗಳನ್ನು, ಭಾವನೆಗಳನ್ನು ಹುಟ್ಟಿಸಿವೆ. ಇಂದಿನ ಯುಗದಲ್ಲಿ ಒಂದು ಸುದ್ದಿ ಕ್ಷಣಾರ್ಧದಲ್ಲಿ ವಿಶ್ವದ ಎಲ್ಲ ಮೂಲೆಗೂ ತಲುಪುತ್ತದೆ. ಎಐ ತಂತ್ರಜ್ಞಾನಗಳಿಂದ ಭಾಷೆಯ ಅಂತರವೂ ಕಡಿಮೆಯಾಗಿ, ಮಾತುಗಳು ನೇರವಾಗಿ ಹೃದಯಗಳಿಗೆ ತಲುಪುವಂತಾಗಿದೆ.
ನಮ್ಮ ಬಗ್ಗೆ ಹಾಗೂ ಶ್ರೀಪೀಠದ ವಿಚಾರಗಳು ಟಿವಿ ವಾಹಿನಿ, ದಿನಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಕ್ಷಣದಿಂದಲೇ ರಾಜ್ಯದ ಮೂಲೆಮೂಲೆಗಳಿಂದ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಿಂದ, ದೂರದ ವಿದೇಶಗಳಿಂದಲೂ ಅನೇಕ ಶಿಷ್ಯರು, ಸದ್ಭಕ್ತರು, ಸ್ನೇಹಿತರು, ಹಿತೈಷಿಗಳು,, ಯೋಗಗುರುಗಳು, ಶಿಕ್ಷಕರು, ಸಹಪಾಠಿಗಳು, ನನ್ನ ವಿದ್ಯಾಗುರುಗಳು ಹಾಗೂ ನಾಡಿನ ವಿವಿಧ ಮಠ-ಪೀಠ ಪರಂಪರೆಯ ಪೀಠಾಧಿಪತಿಗಳು, ಪೂಜ್ಯ ಸ್ವಾಮೀಜಿಗಳು ಕರೆಮಾಡಿದ್ದಾರೆ, ಸಂದೇಶ ಕಳುಹಿಸಿದ್ದಾರೆ. ಅವರು ಹೇಳಿದ ಪ್ರತಿಯೊಂದು ಮಾತು ನನ್ನ ಹೃದಯ ಸ್ಪರ್ಶಿಸಿದೆ.
ಕೆಲ ಕ್ಷಣಗಳಲ್ಲಿ ಮಾತುಗಳು ಬರಲಿಲ್ಲ, ಕೇವಲ ಮೌನವೇ ಉತ್ತರವಾಗಿತ್ತು. ನಿಮ್ಮ ಕಾಳಜಿ, ನಿಮ್ಮ ಪ್ರೀತಿ, ನಿಮ್ಮ ನಂಬಿಕೆ, ಇವು ಮನಸ್ಸನ್ನು ಆಳವಾಗಿ ತಟ್ಟಿದಾಗ, ಕಣ್ಣಂಚಿನಲ್ಲಿ ನೀರು ತುಂಬುವುದು, ಹೃದಯ ಗದ್ಗದಿತವಾಗುವುದು ಸಹಜ. ದೂರದಲ್ಲಿದ್ದರೂ,”ನಾವು ನಿಮ್ಮೊಂದಿಗೆ ಇದ್ದೇವೆ” ಎನ್ನುವ ಭರವಸೆಯ ಧ್ವನಿ, ನನ್ನೊಳಗಿನ ಅಂತಃಸತ್ವ ಜಾಗೃತಗೊಳಿಸಿತು. ಆತ್ಮವಿಶ್ವಾಸ ಹೆಚ್ಚಿಸಿತು.
"ನೊಂದವರ ನೋವ ನೋಯದವರೆತ್ತ ಬಲ್ಲರೋ?" ಎಂಬ ಅಕ್ಕಮಹಾದೇವಿ ಅವರ ವಚನ ನೆನಪಾಯಿತು.
ಈ ಸಂಕಷ್ಟದ ಸಮಯದಲ್ಲಿ ನಿಮ್ಮದೊಂದು ಮಾತು, ಒಂದು ಪ್ರಾರ್ಥನೆ, ಒಂದು ಹಾರೈಕೆ ಇವೆಲ್ಲವೂ ಅಥಣಿ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳವರ, ಬೀಳೂರು ರಾಜಯೋಗಿ ಶ್ರೀ ಗುರುಬಸವ ಮಹಾಸ್ವಾಮಿಗಳವರ ಹಾಗೂ ಮೌನಯೋಗಿ ಶ್ರೀ ಮರುಳಶಂಕರ ಮಹಾಶಿವಯೋಗಿಗಳವರ ಕರುಣಾ ಪ್ರಸಾದವೆಂದು ಸ್ವೀಕರಿಸಿದ್ದೇನೆ. ನಾನು ಒಬ್ಬನಲ್ಲ, ನನ್ನ ಹಿಂದೆ ನಿಮ್ಮೆಲ್ಲರ ಹೃದಯಗಳಿವೆ ಎಂಬ ಭಾವನೆ, ಅಪ್ರತಿಮ ಶಕ್ತಿ ಸಾಮರ್ಥ್ಯ ನೀಡಿದೆ. ನಿಮ್ಮ ಭಕ್ತಿ, ಪ್ರೀತಿ, ಅಭಿಮಾನಕ್ಕೆ ನಾನು ಸದಾ ಚಿರಋಣಿಯಾಗಿದ್ದೇನೆ.
ನಾನು ನಿಮಗೆ ಏನು ಕೊಡಬಲ್ಲೆ ಎಂಬ ಪ್ರಶ್ನೆ ನನ್ನೊಳಗೆ ಮರುಮರು ಕೇಳಿಸುತ್ತಿದೆ.”ನಿಮ್ಮ ಮಂಡೆಗೆ ಹೂವತಹನಲ್ಲದೆ, ಹುಲ್ಲತಾರೆನು” ಎಂಬ ಮಹಾದೇವಿ ಅಕ್ಕನ ವಚನವೇ ನನ್ನ ವಚನವಾಗಿದೆ.
‘ಬೇಕೆಂದಾಗ ದೊಡ್ಡವರ ಮಾಡಿ,
ಬೇಡವೆಂದಾಗ ಕಂದಕಕ್ಕೆ ದೂಡಿ,
ದೂರ ನಿಂತು ನಗುವರು ನೋಡಿ,
ಎದುರಿಗೆ ಕಂಡಾಗ ಕುಶಲ ಸಂಭಾಷಣೆ,
ಮರೆಯಾದ ತಕ್ಷಣ ಮಾಡುವರು ದೂಷಣೆ,
ಏನೀದು ಮನುಜನರ ವಿಚಿತ್ರ ವರ್ತನೆ,
ಇಂತವರ ಬಾಯಲ್ಲಿ ಹೂಡಿಯ ಹೊಯ್ಯದೆ ಬಿಡನೆ ಬಸವಪ್ರಿಯ ಮುರುಘರಾಜೇಂದ್ರ ಪ್ರಭುವೆ
ಎಂಬ ಶರಣರ ಸಂದೇಶ ಅನುಭವಜನ್ಯವಾಗಿದೆ.
ದೇಶದ ಇತಿಹಾಸ ಹೇಳುವುದು ಒಂದೇ ಸತ್ಯವನ್ನು-
ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಛತ್ರಪತಿ ಸಂಭಾಜೀ ಮಹಾರಾಜರು ಸೋತದ್ದು ಶತ್ರುಗಳಿಂದಲ್ಲ, ನಮ್ಮವರ ದ್ರೋಹ, ಮೋಸ, ಅಪ್ರಮಾಣಿಕ ಆಡಳಿತ, ಪಾರದರ್ಶಕವಿಲ್ಲದ ವ್ಯಕ್ತಿತ್ವ ಮತ್ತು ಅಧಿಕಾರದ ದೂರಾಸೆಯಿಂದ; ಆ ಸತ್ಯ ಇಂದಿಗೂ ಕಾಲದ ನೆರಳಾಗಿ ನಮ್ಮ ನಡುವೆ ನಡೆಯುತ್ತಿದೆ.
ಬಾಲ್ಯದ ದಿನಗಳಲ್ಲಿ ವಿಜಯಪುರ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಅಪ್ಪಗಳವರ ಪಾದದಡಿದಲ್ಲಿ ಕುಳಿತು ಭಗವದ್ಗೀತೆಯ ಪ್ರವಚನಗಳನ್ನು ಆಲಿಸಿದ ದಿನಗಳು ಇಂದು ಕಣ್ಣಮುಂದೆ ಜೀವಂತವಾಗುತ್ತಿವೆ. ಆ ದಿನಗಳಲ್ಲಿ ಕೇಳಿದ ಪ್ರತಿಯೊಂದು ಶ್ಲೋಕವೂ, ಆಗ ಅರ್ಥವಾಗದಿದ್ದರೂ, ಇಂದು ಜೀವನದ ಮಧ್ಯದಲ್ಲಿ ನಿಂತು ನೋಡಿದಾಗ, ಅವೇ ನನ್ನೊಳಗೆ ಬೆಳಕಾಗಿ ಕಂಗೊಳಿಸುತ್ತಿವೆ.
ಚಿನ್ಮೂಲಾದ್ರಿ ಬೃಹನ್ಮಠದ ಜಗದ್ಗುರು ಶ್ರೀ ಮುರುಘರಾಜೇಂದ್ರ ಗುರುಕುಲದಲ್ಲಿ ಸಾಧಕನಾಗಿ ಓದುತ್ತಿದ್ದಾಗ ಟ್ರಂಕಿನ ಒಳಭಾಗದಲ್ಲಿ ಅಂಟಿಸಿದ್ದ ಶ್ರೀ ಕೃಷ್ಣನ ಗೀತಾಸಾರ ಇಂದು ಮತ್ತೆ ನೆನಪಾಗುತ್ತಿದೆ.
‘ಆಗಿರುವುದೆಲ್ಲವೂ ಒಳ್ಳೆಯದೆ ಆಗಿದೆ,
ಆಗುತ್ತಿರುವುದೆಲ್ಲವೂ ಒಳ್ಳೆಯದೆ ಆಗುತ್ತಿದೆ,
ಮುಂದೆ ಆಗುವುದೆಲ್ಲವೂ ಒಳ್ಳೆಯದೆ ಆಗಲಿದೆ’
ಈ ಸಾಲುಗಳು ಈಗ ಓದಿದ ಮಾತುಗಳಲ್ಲ-
ಅವು ನನ್ನೊಳಗಿನ ಚೈತನ್ಯಜ್ಯೋತಿಯಾಗಿದೆ.
‘ಬಾರದು ಬಪ್ಪದು; ಬಪ್ಪದು ತಪ್ಪದು ನೋಡಾ ಕೂಡಲಸಂಗಮದೇವಾ.’
ಬರುವುದನ್ನು ತಡೆಯಲು ಸಾಧ್ಯವಿಲ್ಲ, ಬಾರದದ್ದನ್ನು ಪಡೆಯಲು ಸಾಧ್ಯವಿಲ್ಲ. ಎಂಬ ಬಸವಣ್ಣನವರ ವಚನವೂ ಸಾರ್ವಕಾಲಿಕ ಸತ್ಯವಾಗಿದೆ.
‘ಕಂಡೊಂದ ನುಡಿವುದೀ ಲೋಕ,
ಕಾಣದೊಂದ ನುಡಿವುದೀ ಲೋಕ,
ಹಿಂದೆ ನಿಂದಿಸಿದರೆಂದು ಕುಂದಲಿಲ್ಲ,
ಮುಂದೆ ವಂದಿಸಿದರೆಂದುಬ್ಬಲಿಲ್ಲ,
ವಂದನೆ ನಿಂದನೆಯೆಂಬುದು ಉಪಜೀವಿಗಳಿಗಲ್ಲದೆ,
ಉಪಮಾತೀತನಾದ ಪ್ರಾಣಲಿಂಗೈಕ್ಯನಿಗುಂಟೇ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ’
ಎಂಬ ಎಡೆಯೂರು ತೋಂಟದ ಸಿದ್ಧಲಿಂಗೇಶ್ವರ ವಚನಗಳು, ಗೀತೆ, ಉಪನಿಷತ್ತುಗಳು, ಬ್ರಹ್ಮಸೂತ್ರಗಳು, ಸುಭಾಷಿತಗಳು, ಮಹಾತ್ಮರ ಜೀವನ ಚರಿತ್ರೆಗಳು, ಇವುಗಳನ್ನು ಓದುವುದು ಸುಲಭ, ನೆನಪಿಟ್ಟುಕೊಳ್ಳುವುದು ಇನ್ನೂ ಸುಲಭ. ಆದರೆ ಅಪವಾದಗಳು, ಅವಮಾನಗಳು, ನೋವು ನಿಂದನೆಗಳು, ಟೀಕೆ-ಟಿಪ್ಪಣಿಗಳು, ಷಡ್ಯಂತ್ರಗಳು ಬರಸಿಡಿಲಿನಂತೆ ಅಪ್ಪಳಿಸಿದಾಗ, ನಾವು ಸ್ಥಿತಪ್ರಜ್ಞೆಯುಳ್ಳವರಾಗಿರುವುದೇ ನಮ್ಮ ನಿಜವಾದ ಸತ್ವಪರೀಕ್ಷೆ.
‘ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು.
ಜಲಪ್ರಳಯವಾದಲ್ಲಿ ವಾಯುವಿನಂತಿರಬೇಕು.
ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು.
ಜಗತ್‌ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು
ಗುಹೇಶ್ವರನೆಂಬ ಲಿಂಗ ತಾನಾಗಿರಬೇಕು’.
ಜ್ಞಾನ ವೈರಾಗ್ಯದ ಕೀರ್ತಿಶಿಖರ, ಜಗದಜಂಗಮ ಅಲ್ಲಮ ಪ್ರಭುದೇವರ ವಚನವೇ ನಿರ್ವಚನವಾಗಿದೆ.
ಈ ತರಹದ ಅವಮಾನ ನಿಂದನೆ ನೋವು ನನಗೆ ಹೊಸದೆನಲ್ಲ ಎರಡುವರೆ ದಶಕಗಳಿಂದ ಎದುರಿಸುತ್ತಾ ಬಂದಿದ್ದೇನೆ.
‘ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದನೆಗಳು ಬಂದರೆ ಮನದಲ್ಲಿ ಕೋಪವ ತಾಳದೆ, ಸಮಾಧಾನಿಯಾಗಿರಬೇಕು ಚನ್ನಮಲ್ಲಿಕಾರ್ಜುನಾ’ಎಂಬ ಅಕ್ಕನ ವಚನವನ್ನು ಪಚನ ಮಾಡಿಕೊಂಡಿದ್ದೇನೆ.
ನನ್ನನ್ನು ಹತ್ತಿರದಿಂದ ಬಲ್ಲ, ನನ್ನೊಳಗೆ ಜೀವನೋತ್ಸಹದ ಸ್ಫೂರ್ತಿ, ಪ್ರೀತಿಯನ್ನು ತುಂಬಿದ ಇಳಕಲ್ ಶ್ರೀ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಗುರುಮಹಾಂತ ಮಹಾಶಿವಯೋಗಿಗಳವರಿಗೆ ಹಾಗೂ ಅಥಣಿ ಶ್ರೀ ಗಚ್ಚಿನಮಠ, ಧಾರವಾಡ ಶ್ರೀ ಮುರುಘಾಮಠ, ಚಿತ್ರದುರ್ಗ ಶ್ರೀ ಬೃಹನ್ಮಠಗಳಲ್ಲಿ ನನ್ನೊಂದಿಗೆ ಆಟ ಪಾಠ ಆಡಿ, ಓದು ಪೂರೈಸಿ ಇಂದು ನಾಡಿನ ವಿವಿಧ ಸಮುದಾಯವನ್ನು ಮುನ್ನಡಿಸುತ್ತಿರುವ ಪೀಠಾಧಿಪತಿಗಳಿಗೆ, ಹರಿದ್ವಾರ ಅಖಾಡಗಳ ಆಚಾರ್ಯ ಮಹಾಮಂಡಲೇಶ್ವರರಿಗೆ, ಋಷಿಕೇಶದಿಂದ ಹಿಮಾಲಯದವರೆಗೆ ನನ್ನ ಸಾಧನೆ ಸಿದ್ಧಿಗೆ ಸಾಕ್ಷಿಯಾದ ಸಾಧಕರಿಗೆ, ಜಗವೆಲ್ಲಾ ಹರಡಿ ಯೋಗಪ್ರಸಾರ ಕಾಯಕದಲ್ಲಿ ನಿರತರಾಗಿರುವ ನನ್ನೆಲ್ಲಾ ಶಿಷ್ಯರಿಗೆ, ಎಲ್ಲೋ ಎಲೆಮರೆಯ ಕಾಯಿಯಂತಿರುವ ನನ್ನನ್ನು ಕರೆದು ತಮ್ಮ ಮಹಾಮನೆಯಲ್ಲಿಟ್ಟುಕೊಂಡು ಅನ್ನ ಆಶ್ರಯ ನೀಡುತ್ತಾ ಟಿವಿ9 ಕನ್ನಡ ವಾಹಿನಿಯ ‘ಯೋಗಾಯೋಗ-ಔಷಧಿಯಿಲ್ಲದ ಆರೋಗ್ಯ’ ಕಾರ್ಯಕ್ರಮದ ಮೂಲಕ ಕರ್ನಾಟಕದ ಮನೆಮನೆಗೆ ಪರಿಚಯಿಸಿದ ಹಾಗೂ ಶ್ವಾಸಯೋಗ ಸಂಸ್ಥೆಗೆ ಶ್ವಾಸ ವಿಶ್ವಾಸದ ತುಂಬಿದ ಶ್ರೀ ಮಹೇಂದ್ರ ಮಿಶ್ರಾ ಅವರಿಗೆ ಹಾಗೂ ನನ್ನೆಲ್ಲ ಗುರುಬಂಧುಗಳಿಗೆ ಎಲ್ಲವೂ ಗೊತ್ತಿದೆ.
"ಮೈತ್ರೀ-ಕರುಣಾ-ಮುದಿತಾ-ಉಪೇಕ್ಷಾಣಾಂ
ಸುಖ-ದುಃಖ-ಪುಣ್ಯಪುಣ್ಯ-ವಿಷಯಾನಾಂ
ಭಾವನಾತಶ್ಚ ಚಿತ್ತ-ಪ್ರಸಾದಂ."
ಇದು ಯೋಗಸೂತ್ರದ ಸಮಾಧಿಪಾದದ ೩೩ನೇ ಸೂತ್ರ. ಇಲ್ಲಿ ಮಹರ್ಷಿ ಪತಂಜಲಿಯವರು ನಮ್ಮ ಮನಸ್ಸಿನಲ್ಲಿ ಮೂಡುವ ವಿಚಾರ, ಭಾವನೆಗಳನ್ನು ಪ್ರಸಾದಿಕವಾಗಿಟ್ಟುಕೊಳ್ಳುವ ವಿಧಾನವನ್ನು ಹೇಳಿದ್ದಾರೆ. ಇದನ್ನು ನನ್ನ ಯೋಗಗುರುದೇವರಾದ ಶ್ರೀ ಸ್ವಾಮಿ ವೇದ ಭಾರತೀಯವರ ಪದತಲದಲ್ಲಿ ಕುಳಿತು ಹಿಮಾಲಯ ಧ್ಯಾನಯೋಗ ಪರಂಪರೆಯಲ್ಲಿ ಅರಳಿದ್ದೇನೆ.
‘ಕಾಣದಠಾವಿನಲಿ ಜರೆದರೆಂದಡೆ ಕೇಳಿ ಪರಿಣಾಮಿಸಬೇಕು.
ಅದೇನು ಕಾರಣ, ಕೊಳ್ಳದೆ ಕೊಡದೆ ಅವರಿಗೆ ಸಂತೋಷವಹುದಾಗಿ!
ಎನ್ನ ಮನದ ತದ್‌ದ್ವೇಷವಳಿದು
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು,
ಕೂಡಲಸಂಗಮದೇವಾ’ಎಂಬ ಬಸವಗುರುವಿನ ಅಡಿಗೆ ಎಡೆಯಾಗಿದ್ದೇನೆ.
‘ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ’
ಈ ಲಿಂಗತತ್ವವೇ ನನ್ನ ನಡೆಗೆ ದಾರಿ.
‘ಭಕ್ತನ ಮನೆಯಂಗಳವೇ ವಾರಣಾಸಿ;
ಭಕ್ತನೇ ಭಗವಂತ’ಇದು ನನ್ನ ಅಚಲ ನಂಬಿಕೆ.
ಅನ್ನ, ಅಕ್ಷರ, ಆಶ್ರಯ, ಆರೋಗ್ಯ, ಆಧ್ಯಾತ್ಮ-
ಈ ಪಂಚದಾಸೋಹದ ಮೂಲಕ ಸಮುದಾಯದ ಉದ್ಧಾರವೇ ನನ್ನ ಸಂಕಲ್ಪ.
ಯಾವ ಜನ್ಮದ ಪುಣ್ಯದ ಫಲವೋ!
ಕಳೆದ ಎಂಟು ವರ್ಷಗಳಲ್ಲಿ ಎಂದೂ ಕಾಣದ ಭಕ್ತಗಣವು ಇಂದು ಗಡಿಕಾಯುವ ಸೈನಿಕರಂತೆ ನಿತ್ಯ ಸಹಸ್ರಾರು ಸದ್ಭಕ್ತ ತಂದೆ ತಾಯಿಗಳು ಕುಟುಂಬ ಸಮೇತರಾಗಿ ಶ್ರೀಪೀಠಕ್ಕೆ ಆಗಮಿಸಿ ಲಿಂಗೈಕ್ಯ ಜಗದ್ಗುರು ಶ್ರೀ ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ ಕರ್ತೃಗದ್ದುಗೆಯ ದರ್ಶನ, ನಮ್ಮೊಂದಿಗೆ ಕ್ಷಣಹೊತ್ತು ಅಣಿಮುತ್ತಿನಂತ ಮಾತುಕತೆ, ಆಮೇಲೆ ಒಂದಷ್ಟು ಶೇಷ ಪ್ರಸಾದ ಸ್ವೀಕರಿಸುತ್ತಿರುವ ದೃಶ್ಯವು ನನಗೆ ಬಸವಕಲ್ಯಾಣದ ಮಹಾಮನೆಯ ನೆನಪು ತರುತ್ತಿದೆ.
ಈ ನಿಮ್ಮ ನಿಷ್ಕಲ್ಮಶ ಭಕ್ತಿ, ಪ್ರೀತಿ, ನಂಬಿಕೆ, ಶ್ರದ್ಧೆ ಇವು ನನ್ನ ಮುಂದಿನ ಹೆಜ್ಜೆಗಳಿಗೆ ಶಕ್ತಿ, ಯುಕ್ತಿ, ಮುಕ್ತಿಯ ಸೋಪಾನವಾಗಲಿವೆ.
ಶರಣು ಶರಣಾರ್ಥಿಗಳು.
ಹರಗುರು ಚರಣಸೇವೆಯಲ್ಲಿ...
ಜಗದ್ಗುರು ಶ್ರೀಶ್ರೀಶ್ರೀ ವಚನಾನಂದ ಸ್ವಾಮೀಜಿ
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ
ಹರಪೀಠ, ಹರಿಹರ.